ಮಾಸ್ತಮ್ಮ
ಜನಪದರ ಒಂದು ದೇವತೆ. ಜನಪದ ದೇವತೆಗಳಲ್ಲಿ ಗ್ರಾಮದೇವತೆ, ಕುಲದೇವತೆ ಮತ್ತು ಗೃಹದೇವತೆಗಳು ಮುಖ್ಯವಾದವು. ಇವುಗಳಲ್ಲಿ ಮಾಸ್ತಮ್ಮ ಗೃಹದೇವತೆ ಗುಂಪಿಗೆ ಸೇರಿದ ದೇವತೆ. ಪ್ರತಿಯೊಂದು ಊರಿನಲ್ಲೂ ಒಂದೊಂದು ಗುಂಪಿನ ಜನರಿಗೆ ಒಂದೊಂದು ಸ್ತ್ರೀಗೃಹದೇವತೆಯಿದ್ದು, ಆ ದೇವತೆಗೆ ಅವರು ತಪ್ಪದೆ ನಡೆದುಕೊಳ್ಳುವುದನ್ನೂ ಆ ಮೂಲಕ ಕೆಲವು ಆಚರಣೆಗಳೂ ರೂಢಿಗೆ ಬಂದಿರುವುದನ್ನೂ ಕಾಣಬಹುದು. ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ತಮ್ಮ ಮನೆದೇವರಾದ ಮಾಸ್ತಮ್ಮನಿಗೆ ಶ್ರದ್ಧೆಯಿಂದ ನಡೆದುಕೊಳ್ಳುವ ಒಕ್ಕಲುಗಳಿರುವುದು ತಿಳಿದುಬರುತ್ತದೆ.

	ಮಾಸ್ತಮ್ಮ ಎಂಬ ಪದ ಮಹಾಸತಿ+ಅಮ್ಮ ಎಂಬುದರಿಂದ ಬಂದುದಾಗಿದೆ. ಮಹಾಸತಿ ರೂಪ ಬರಬರುತ್ತ ಜನರ ಬಾಯಲ್ಲಿ ಮಾಸ್ತಿಯಾಗಿ, ಅದು ಪುರುಷ ಸೂಚಕವೋ ಸ್ತ್ರೀಸೂಚಕವೋ ತಿಳಿಯದೆ ಹೋದುದರ ಕಾರಣ ಅದಕ್ಕೆ ಸ್ತ್ರೀಸೂಚಕವಾದ ಅಮ್ಮ ಸೇರಿ ಮಾಸ್ತಮ್ಮ ಆಗಿರಬೇಕೆನಿಸುತ್ತದೆ. ಇದರ ಮೂಲದಲ್ಲಿ ಮಹಾಸತಿ ಪದ ಪ್ರಚಿತವಿದ್ದುದರಿಂದ, ಸಾಂಸಾರಿಕ ಅಥವಾ ಸಾಮಾಜಿಕ ಕಾರಣಕ್ಕಾಗಿ ತನ್ನ ಜೀವನವನ್ನು ತ್ಯಾಗಮಾಡಿದ ಹೆಣ್ಣೊಬ್ಬಳ ಬಲಿದಾನದ ಕಥೆ ಇದರ ಹಿಂದೆ ಸುಪ್ತವಾಗಿರಬಹುದು. ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ, ಅಂಕಿತನಾಮ ಮರೆತು ಹೋಗಿ, ಅನ್ವರ್ಥನಾಮವೇ ಪ್ರಸಿದ್ಧವಾಗುವುದನ್ನು ಕಾಣುತ್ತೇವೆ.

	ವಾಚಿಕ ಪರಂಪರೆಯ ಪಾಠವೊಂದರ ಪ್ರಕಾರ ಮಾಸ್ತಮ್ಮ ಮಂಡ್ಯ ತಾಲ್ಲೂಕಿನ ಹುಲಿವಾಹನದಲ್ಲಿ ಹುಟ್ಟಿ, ಮದ್ದೂರು ತಾಲ್ಲೂಕಿನ ಈರೇಗೌಡನ ದೊಡ್ಡಿಗೆ ದತ್ತು ಮಗಳಾಗಿ ಬಂದು, ಅದೇ ತಾಲ್ಲೂಕಿನ ಹೊಸಕೆರೆಗೆ ವಿವಾಹವಾಗಿದ್ದಂತೆ ತಿಳಿದುಬರುತ್ತದೆ. ಗಂಡನ ಮನೆಯಲ್ಲಿ ನಡೆದ ಒಂದು ಘಟನೆ ಇವಳು ಸತಿಹೋದುದಕ್ಕೆ ಕಾರಣವಾಗಿದೆ. ಆ ಕಥೆ ಹೀಗಿದೆ : ಗಂಡನ ಮನೆ ಸೇರಿದ ಮಾಸ್ತಮ್ಮನ ಅತೀವ ಸೌಂದರ್ಯಕ್ಕೆ ಅದೇ ಊರಿನ ಕ್ಷೌರಿಕನೊಬ್ಬ ಮರುಳಾಗಿ ತನ್ನ ವಿಷಯಲಂಪಟತನದಿಂದ ಮಾಸ್ತಮ್ಮನ ಬೆನ್ನು ಹತ್ತಿ ಇಲ್ಲದ ಉಪಟಳ ಕೊಡಲು ಹೋದಾಗ ಬೇಸತ್ತ ಮಾಸ್ತಮ್ಮ ಸತಿಹೋದಳೆಂದು ಹೇಳಲಾಗಿದೆ. ಈಕೆ ಸತಿ ಹೋಗುವಾಗ ಹುಣಿಸೆ ಹೂವಾಗಬೇಡ, ಮಾವು ಫಲವಾಗಬೇಡ, ಹೊಸಕೆರೆಗೆ ಹುಟ್ಟಿದ ಹೆಣ್ಣುಮಕ್ಕಳಿಗೆ ಗಂಡ ಇದ್ದರೆ ಮಕ್ಕಳಿಲ್ಲ, ಮಕ್ಕಳಿದ್ದರೆ ಗಂಡ ಇಲ್ಲ. ಹೊರಗೆ ಕೊಟ್ಟವು ಬದುಕುವ ಹಾಗಿಲ್ಲ. ಈರೇಗೌಡನ ದೊಡ್ಡಿಗೂ ಹೊಸಕೆರೆಗು ತರೋಳಿ ಕೊಡೋಳಿ ಇರೋಲ್ಲ ಎಂದು ಶಾಪಕೊಟ್ಟು ಕೊಂಡವಾದಳು. ಅನಂತರ ಅಲ್ಲಿಯೇ ಒಡಮೂಡಿದಳು. ಮಾವನೇ ಗುಡಿ ಕಟ್ಟಿಸಿದ.

	ಇದಿಷ್ಟು ಮಾಸ್ತಮ್ಮನ ಬಲಿದಾನಕ್ಕೆ ಹಿನ್ನೆಲೆಯಾಗಿರುವ ಕಥೆ. ಇಂದಿಗೂ ಹೊಸಕೆರೆಯಲ್ಲಿ ಮಾಸ್ತಮ್ಮನ ಗುಡಿ ಇದೆ. ಅದರಲ್ಲಿ ಗರ್ಭಗೃಹ ಮತ್ತು ಹಜಾರ ಎರಡೇ ಅಂಕಣಗಳು. ಗರ್ಭಗೃಹದಲ್ಲಿ ಹುತ್ತದ ರೂಪದಲ್ಲಿ ಮಾಸ್ತಮ್ಮ ಒಡಮೂಡಿದ್ದಾಳೆ ಎನ್ನುತ್ತಾರೆ. ಹೀಗೆ ಒಡಮೂಡಿದ ಮೇಲೆ ಈರೇಗೌಡನ ದೊಡ್ಡಿಯಲ್ಲಿದ್ದ ಮಾಸ್ತಮ್ಮನ ಹಲಗೆ, ಚಿಕ್ಕಮ್ಮನ ಹಲಗೆ ಮತ್ತು ಕ್ಯಾತಮ್ಮನ ಹಲಗೆಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಇಟ್ಟರೆಂದು ಹೇಳಲಾಗುತ್ತಿದೆ. ಮಾಸ್ತಮ್ಮನ ಶಾಪದ ಪರಿಣಾಮವೇ ಇಂದಿಗೂ ಈರೇಗೌಡನ ದೊಡ್ಡಿಗೂ ಹೊಸಕೆರೆಗೂ ವಿವಾಹ ಸಂಬಂಧ ಇಲ್ಲದಿರುವುದಕ್ಕೆ ಕಾರಣವೆಂದು ಹಿರಿಯರ ಅಭಿಪ್ರಾಯ.

	ಇಂಥ ಕಥೆಗಳು ಇತರ ಕಡೆಯೂ ದೊರೆಯುವ ಸಾಧ್ಯತೆ ಇದೆ. ಉದಾಹರಣೆಗೆ ತುಮಕೂರಿನ ಕೆಲವು ಪ್ರದೇಶಗಳಲ್ಲಿ ಮಾಸ್ತಮ್ಮನ ದೇವಸ್ಥಾನವೂ ಇವಳಿಗೆ ಸಂಬಂಧಿಸಿದ ಕಥೆಗಳೂ ಪ್ರಚಲಿತವಿರುವುದನ್ನು ಕಾಣಬಹುದು. ಇಲ್ಲಿಯ ಉದ್ದೇಶ ಒಂದೇ ಆದರೂ ಕಥನ ವಿವರಗಳಲ್ಲಿ ವ್ಯತ್ಯಾಸವಿರುವಂತೆ ತೋರುತ್ತದೆ. ಇಂಥ ಸಂದರ್ಭಗಳಲ್ಲಿ ಇದೇ ಬಗೆಯ ಹಿನ್ನೆಲೆಯುಳ್ಳ ಇತರ ಕಥೆಗಳ ಅಂಶಗಳು ಬಂದು ಸೇರಿಕೊಂಡಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆದರೆ ಇವಳ ಸೌಂದರ್ಯದ ವಿವರ ಹಾಗೂ ಇವಳು ಕೊಂಡವಾದ ವಿಷಯ ಸಮಾನ ಆಶಯಗಳಾಗಿ ಪರಿಗಣಿತವಾಗುತ್ತವೆ.

	ಮಾಸ್ತಮ್ಮನಿಗೆ ಸೇರಿದ ಒಕ್ಕಲುಗಳು ಇಂದಿಗೂ ಹಬ್ಬಹರಿದಿನ ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮಾಸ್ತಮ್ಮನ ಗುಡಿಗೆ ಹೋಗಿ ಪೂಜೆ ಸಲ್ಲಿಸಿ ಬರುವುದನ್ನು ನೋಡಬಹುದು. ಇಂಥ ಸಮಯಗಳಲ್ಲಿ ವಿಶೇಷವಾಗಿ ಚಿಗಳಿ ತಂಬಿಟ್ಟನ್ನು ಮಾಡುವುದು ರೂಢಿ. ಹೆಂಗಸರು ಹೋದರೆ ಗುಡಿಯ ಹಜಾರದಲ್ಲಿ ಎಡೆಮಾಡಬೇಕಾಗುತ್ತದೆ: ಆದರೆ ಗಂಡಸರು ಗರ್ಭಗೃಹದೊಳಗೆ ಹೋಗಿ ಎಡೆಮಾಡಬಹುದು. ಮಾಸ್ತಮ್ಮನಿಗೆ ನಡೆದುಕೊಳ್ಳುವ ಮನೆಯ ಹೆಣ್ಣು ಮಗಳು ಮತ್ತು ಸೊಸೆಯರು ಹೊಸಬಟ್ಟೆ ತೊಡುವ ಪ್ರತಿಸಾರಿಯೂ ಮಾಸ್ತಮ್ಮನಿಗೆ ಇಟ್ಟು ಪೂಜೆಮಾಡಿ ತೊಟ್ಟುಕೊಳ್ಳಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ, ಮನೆಯಲ್ಲಿಯೋ ಬಾವಿ ಕಾಲುವೆಗಳ ಸಮೀಪದಲ್ಲಿಯೋ ತುಂಬಿದ ಬಿಂದಿಗೆ ಮೂರು ಕಲ್ಲುಗಳನ್ನು ಇಟ್ಟು ಪೂಜೆ ಮಾಡಬಹುದು. ಪುರುಷರ ವಿಷಯದಲ್ಲಿ ಈ ಕಟ್ಟು ಬಹುತೇಕ ಅನ್ವಯಿಸುವುದಿಲ್ಲ. ಮದುವೆಯಾದ ತರುಣರಲ್ಲಿ ನವದಂಪತಿಗಳು ಮಾಸ್ತಮ್ಮನ ಗುಡಿಗೆ ಹೋಗಿ ಪೂಜೆಮಾಡಿ ಬರಬೇಕೆನ್ನುವ ಸಂಪ್ರದಾಯವಿದೆ. ಮನೆದೇವತೆ ಒಂದೇ ಆಗಿರುವ ಒಕ್ಕಲುಗಳಲ್ಲಿ ವೈವಾಹಿಕ ಸಂಬಂಧ ನಿಷೇಧ.

	ಪತಿ ಮಡಿದಮೇಲೆ ಸತಿ ಸಹಗಮನ ಮಾಡುತ್ತಿದ್ದ ಸಂಪ್ರದಾಯ ಕರ್ನಾಟಕದಲ್ಲಿ ಪ್ರಾಚೀನಕಾಲದಿಂದಲೂ ಕಂಡುಬಂದಿದೆ. ಅಂಥವರನ್ನು ಮಹಾಸತಿಯರೆಂದು ಸ್ತುತಿಸಿ ಅವರ ಸ್ಮಾರಕವಾಗಿ ಮಾಸ್ತಿಕಲ್ಲುಗಳನ್ನು ನೆಡುತ್ತಿದ್ದುದು ಕೂಡ ಪ್ರಾಚೀನವೇ ಆಗಿದೆ. ಹಾಗೆಯೇ ಸತಿ ಕೆಲವು ಉತ್ಕಟ ಪರಿಸ್ಥಿತಿಗಳಲ್ಲಿ ತನ್ನ ಚಾರಿತ್ರ್ಯಕ್ಕೆ ಕಳಂಕ ಬಂದೀತೆಂದು ತಿಳಿದು ಪತಿ ಇದ್ದರೂ ಕೊಂಡವಾಗುವುದು ರೂಢಿಯಲ್ಲಿದ್ದಿರಬೇಕೆಂದು ಕಾಣುತ್ತದೆ. ಇದಕ್ಕೆ ಮಾಸ್ತಮ್ಮನ ಕಥೆ ಒಂದು ನಿದರ್ಶನ. ಸಹಗಮನ ಪದ್ಧತಿಯಂತೆ ಸತಿಯಾದವರ ಸ್ಮರಣೆ ಮಾಸ್ತಿಕಲ್ಲುಗಳನ್ನು ನೆಟ್ಟು ಗೌರವ ತೋರಿದಂತೆ. ಇಲ್ಲಿ ಮಾಸ್ತಮ್ಮನ ಗುಡಿಯನ್ನು ಕಟ್ಟಿಸಿ ತಮ್ಮ ಗೌರವಾದರ ಭಕ್ತಿಭಾವಗಳನ್ನು ಸೂಚಿಸಲಾಗಿದೆ. ಮಾಸ್ತಮ್ಮನಿಗೆ ಸಂಬಂಧಿಸಿದ ಪ್ರತಿಯೊಂದು ಕಥೆಯ ನಡಾವಳಿಯ ಅಂತರಾಳದಲ್ಲಿಯೂ ಸಂಭವನೀಯ ಚಾರಿತ್ರಿಕ ಘಟನೆಯೊಂದಿದ್ದು, ಕ್ರಮೇಣ ಐತಿಹ್ಯದ ಅಂಶಗಳು ಅದರ ಸುತ್ತ ಬೆಳೆಯುತ್ತ ಹೋಗಿರಬೇಕೆಂದು ತೋರುತ್ತದೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ